- ಕೃತಿಯ ಹೆಸರು:
‘ವ್ಯವಹಾರ ಗಣಿತ’
- ಲೇಖಕನ ಹೆಸರು:
ರಾಜಾದಿತ್ಯ
- ಕಾಲ:
ಸುಮಾರು ಹನ್ನೆರಡು ಮತ್ತು ಹದಿಮೂರನೆಯ ಶತಮಾನಗಳ ಸಂಧಿಕಾಲ
- ಕೃತಿಯ ವಸ್ತು:
ವ್ಯಾಪಾರ, ವ್ಯವಹಾರಗಳಿಗೆ ಅಗತ್ಯವಾದ ಗಣಿತಶಾಸ್ತ್ರ
- ಪುಸ್ತಕದ ಪರಿಚಯ:
‘ವ್ಯವಹಾರ ಗಣಿತ’
ಎಂಬ ಪುಸ್ತಕದ ಲೇಖಕನಾದ ರಾಜಾದಿತ್ಯನು ಕರ್ನಾಟಕದ ಮೊದಮೊದಲ ಗಣಿತಶಾಸ್ತ್ರಜ್ಞರಲ್ಲಿ ಒಬ್ಬ. ಕೊಂಡಿಮಂಡಲ
ಪ್ರಾಂತ್ಯದ ಪೂವಿಂಬಾಗೆ ಎನ್ನುವುದು ಅವನ ತವರೂರು. ಅವನನ್ನು ರಾಜವರ್ಮ, ಬಾಚಿರಾಜ ಮುಂತಧ ಹೆಸರುಗಳಿಂದಲೂ
ಕರೆಯುತ್ತಿದ್ದರು. ‘ಗಣಿತವಿರಿಂಚಿ’ ಮತ್ತು ‘ಗಣಿತವಿಳಾಸ’ ಎನ್ನುವುವು ಅವನ ಬಿರುದುಗಳು. ಅವನು ಹೊಯ್ಸಳಸಾಮ್ರಾಜ್ಯದ ದೊರೆಯಾದ
ಇಮ್ಮಡಿ ಬಲ್ಲಾಳನ (ಕ್ರಿ.ಶ.1173-1220) ಆಸ್ಥಾನದಲ್ಲಿ ವಿದ್ವಾಂಸನಾಗಿದ್ದನು. ರಾಜಾದಿತ್ಯನು ವ್ಯವಹಾರ
ಗಣಿತವಲ್ಲದೆ, ‘ಕ್ಷೇತ್ರಗಣಿತ’,
‘ಲೀಲಾವತಿ’,
‘ವ್ಯವಹಾರರತ್ನ’,
‘ಚಿತ್ರಹಸುಗೆ’
ಮತ್ತು ‘ಜೈನಗಣಿತಸೂತ್ರ ಟೀಕೋದಾಹರಣ’ ಎಂಬ ಕೃತಿಗಳನ್ನು ಬರೆದಿದ್ದಾನೆ. ಆದರೆ,
‘ವ್ಯವಹಾರಗಣಿತ’ವನ್ನು
ಹೊರತುಪಡಿಸಿ ಬೇರೆ ಯಾವ ಪುಸ್ತಕವೂ ಮುದ್ರಿತವಾಗಿಲ್ಲ. ದುರದೃಷ್ಟವಶಾತ್ ಉಳಿದಿರುವ ಹಸ್ತಪ್ರತಿಗಳು
ಅಪೂರ್ಣವೂ ಕಲುಷಿತವೂ ಆಗಿವೆ. ವ್ಯವಹಾರಗಣಿತವು ಗದ್ಯ
ಮತ್ತು ಪದ್ಯಗಳು ಸಂಯೋಜಿತವಾಗಿರುವ ಪುಸ್ತಕ. ಸೂತ್ರಗಳುಮತ್ತು ಪ್ರಮೇಯಗಳನ್ನು (ಥೀರಂ) ಪದ್ಯದಲ್ಲಿಯೂ
ವಿವರಣೆಗಳು ಮತ್ತು ಉದಾಹರಣೆಗಳನ್ನು ಗದ್ಯದಲ್ಲಿಯೂ ಹೇಳಲಾಗಿದೆ. ಈ ಪುಸ್ತಕದಲ್ಲಿ ಎಂಟು ಅಧ್ಯಾಯಗಳಿದ್ದು
ಅವುಗಳನ್ನು ಅಧಿಕಾರಗಳೆಂದು ಕರೆಯಲಾಗಿದೆ. ಈ ಅಧ್ಯಾಯಗಳು ಸಹಜ ತ್ರಯರಾಶಿ, ವ್ಯಸ್ತ ತ್ರಯರಾಶಿ, ಸಹಜ
ಪಂಚರಾಶಿ, ವ್ಯಸ್ತ ಪಂಚರಾಶಿ, ಸಹಜ ಸಪ್ತರಾಶಿ, ವ್ಯಸ್ತ ಸಪ್ತರಾಶಿ, ಸಹಜ ನವರಾಶಿ, ವ್ಯಸ್ತ ನವರಾಶಿ,
ಪದಪಿನ ಸೂತ್ರ, ಬಣ್ಣಾಂತರದ ಸೂತ್ರ, ಹೊದೆಯಂಬಿನ ಸೂತ್ರ, ವಿಧುರೆ, ತೂಬಿನ ಸೂತ್ರ, ಹರಿವರಿಯ ಸೂತ್ರ,
ಚಕ್ರಬಡ್ಡಿ ಮುಂತಾದ ಪರಿಕಲ್ಪನೆಗಳನ್ನು ವಸ್ತುವಾಗಿ ಹೊಂದಿವೆ. ಈ ಗ್ರಂಥದಲ್ಲಿ ತಾಂತ್ರಿಕವಾದ ಸಂಗತಿಗಳನ್ನು
ಬಹಳ ಸರಳವಾಗಿ, ಪಾರದರ್ಶಕವಾಗಿ ಮತ್ತು ಮನಮುಟ್ಟುವಂತೆ ಹೇಳಲಾಗಿದೆ. ಗಣಿತಕ್ಕೆ ಸಂಬಂಧಿಸಿದ ವಿಷಯಗಳನ್ನು
ಗದ್ಯದಲ್ಲಿ ವಿವರಿಸುವಾಗ ಲೇಖಕನು ಭಾಷೆಯ ಮೇಲೆ ತನಗಿರುವ ಹಿಡಿತವನ್ನು ತೋರಿಸಿದ್ದಾನೆ. ಅವನು ಭಾಸ್ಕರಾಚಾರ್ಯನ
ಕೃತಿಗಳಿಂದ ಕೆಲವು ಸಂಗತಿಗಳನ್ನು ಪಡೆದುಕೊಂಡಿದ್ದಾನೆ. ಈ ಪುಸ್ತಕವು ಗಣಿತದ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳಲ್ಲಿ
ಸಾಕಷ್ಟು ಜನಪ್ರಿಯವಾಗಿದ್ದಂತೆ ತೋರುತ್ತದೆ.
- ಪ್ರಕಟಣೆಯ ಇತಿಹಾಸ:
1956, ಸಂಪಾದಕರು ಎಂ. ಮರಿಯಪ್ಪ ಭಟ್ಟ, ಮದ್ರಾಸ್ ವಿಶ್ವವಿದ್ಯಾಲಯ, ಮದ್ರಾಸು.
|